ಒಡಲೊಂದೆ..ಎಷ್ಟೊಂದು ಮದಿಲುಗಳು....
ಹೀಗೊಂದು ಪಯಣದಲ್ಲಿ ಒದಗುವ ಆಸರೆಯ ಮಡಿಲುಗಳೆಷ್ಟೋ ...ಯಾರನ್ನೋ ಒಂದು ಘಳಿಗೆ ಹಿಡಿದು ಉಳಿಸಿಕೊಳ್ಳುವ ಈ ಮಡಿಲಿನ
ತಂಪು ಎಂಥದೋ? ಆಗಾಗ ಬರುತ್ತಿರೋಣ ..
'ಅಮ್ಮಾ' ಕೂಗುತ್ತ ಒಳಬಂದ ಹುಡುಗಿ. ಏನು ಮರಿ? ಪ್ರಶ್ನಿಸಿದ ಅಮ್ಮ ..'ಕೆಲಸ ಜಾಸ್ತಿ ಇತ್ತು , ತಡ ಆಯ್ತು' . ಬ್ಯಾಗ್ ಕೆಳಗಿಟ್ಟು ಕೈ-ಕಾಲು
ತೊಳೆಯಲು ಹೋದಳು. 'ಹೌದ, ಟೀ ಕುಡಿದು ಸ್ವಲ್ಪ ಸುಧಾರಿಸ್ಕೋ..ಉಳಿದದ್ದು ಇರಲಿ..' ನಿಮ್ಮ ಮಗಳಾ? ಹೊಸದಾಗಿ ಕಂಡ ಪಕ್ಕದ ಮನೆಯಾಕೆಯ ಪ್ರಶ್ನೆ . 'ಹಾಗೇ ಅಂದುಕೊಳ್ಳಿ , ಮಗಳು ಅಂದ್ರೇನು,ಸೊಸೆ ಅಂದ್ರೇನು
ನನಗೇನು ಅಂಥಾ ವ್ಯತ್ಯಾಸ ಇಲ್ಲ.'
'ಏನಾದ್ರೂ ಹೇಳಿ ಈ ಗಂಡುಮಕ್ಕಳು ಮದುವೆ ಆಗಿದ್ದೆ ಹೆಂಡತಿಯ ಹಿಂದೇಇರ್ತಾರೆ' ಬಾಗಿಲಿಗೊರಗಿಕೊಂಡೆ ನಿಂತ ಪಕ್ಕದ ಆಕೆ.
ಅದರಲ್ಲೇನು ವಿಶೇಷ ಬಿಡಿ, ಮಕ್ಕಳಾಗೆ ಇದ್ದಾಗ ಅಮ್ಮಂದಿರ ಹತ್ತಿರ, ಗಂಡ ಅಂತ ಆದಮೇಲೆ ಹೆಂಡತಿ ಹತ್ತರ ಇರ್ಬೇಕು ತಾನೆ ..
ಪಾಪ ಆ ಮಗಳು ಎಲ್ಲರನ್ನು ಬಿಟ್ಟು ಗಂಡನ ಹತ್ತಿರ ಇರ್ತಾಳೆ ಅಲ್ವ?
'ಹೌದಪ್ಪ ಅದು ಹಾಗೆ ನಡೆದುಕೊಂಡು ಬಂದಿರೋದಲ್ವ ' .. ಮನೆಯಾಕೆಯ ಮೌನ ಪಕ್ಕದಾಕೆಯ ಕಸಿವಿಸಿ..
'ನೀವು ಮದುವೆ ಮಾಡಿಕೊಂಡು ಬಂದಾಗಲು ನಿಮ್ಮ ಪಕ್ಕದವರು ನಿಮ್ಮ ಅತ್ತೆ ಹತ್ತಿರ ಹೀಗೇ ಅಂದಿರಬಹುದಲ್ವ ..'
ಕೈ-ಕಾಲು ತೊಳೆದುಕೊಂಡು ಬಂದ ಹುಡುಗಿಯ ಕೈಗೆ ಟೀ ಬಟ್ಟಲು ಕೊಡುತ್ತಾ ' ಇಂಥ ಮಾತಿಗೆ ಪರಿಚಯ ಕೂಡ ಬೇಕಾಗಿಲ್ಲ'
'ಇರಲಿ ಬಿಡಿ ಅಮ್ಮ , ಅವರು ನಮ್ಮನ್ನು ನೋಡ್ತಿರೋದು ಇವತ್ತು ಮಾತ್ರ ತಾನೆ.. ದಿನಗಳು ಸರಿದ ಹಾಗೆ ಅರ್ಥ ಮಾಡ್ಕೊಳ್ತಾರೆ '
ಬಾಗಿಲು ಹಾಕಿ ತಮ್ಮ ತಮ್ಮ ಕೆಲಸ ... --ನಾಳೆ ಬಾಗಿಲು ತೆರೆದ ನಂತರ....
ಹೋ ಈವತ್ತು ಭಾನುವಾರ. ಈ ಹುಡುಗರು ಏಳೋದೇ ತಡ. ಇನ್ನು ಉಳಿದ ಕೆಲಸಗಳೂ ಅಷ್ಟೇ..
ಪಕ್ಕದಾಕೆ ಇಷ್ಟೇ ಇಣುಕಿ 'ಕಾಫಿ ಆಯ್ತಾ?' ಕೇಳಿದ್ದಾಯ್ತು.. 'ಆಗ್ತಾ ಇದೆ' ಉತ್ತರವೂ ಹೋಯ್ತು.
ಅಷ್ಟರಲ್ಲೇ ಎದ್ದು ಹೊರಬಂದ ಪುಟ್ಟಿ 'ಅಮ್ಮ ನಂಗು ಕಾಫಿ' ಅಂದಿದ್ದು ಆಕೆಗೂ ಕೇಳಿತು. 'ಸ್ಸರಿ' ಆಕೆ ಅಲ್ಲಿರಲೇ ಇಲ್ಲ.
ತಿಂಡಿ ತಿಂದು, ಅಡಿಗೆ ಮುಗಿಸಿ ಮೂವರು ಹೊರಗೆ ಹೊರಟಾಗ ಪಕ್ಕದಾಕೆಯ ಮಗ ತನ್ನ ಗಾಡಿ ತೊಳೆಯುತ್ತಿದ್ದ.
ತಲೆ ಎತ್ತಿ ನೋಡಿ ನಸುನಕ್ಕ. ಪ್ರತಿನಕ್ಕು ನಮ್ಮ ದಾರಿ ಹಿಡಿದೆವು.
ವಾಪಸ್ ಬರುವ ವೇಳೆಗೆ ಪಕ್ಕದಾಕೆಯ ಹಿರಿಯ ಸೊಸೆ ಹಾಲ್ನಲ್ಲಿ ಕುಳಿತುಕೊಂಡಿದ್ದು ಸುತ್ತ ಏನೆಲ್ಲಾ ಸಾಮಾನು
ಹರಡಿಕೊಂಡಿದ್ದವು. ಮುಖ ಸಪ್ಪೆ. ಮನೆಯ ಬೀಗ ತೆಗೆದು ಒಳಗೆ ಹೊಕ್ಕೆವು. ಛಿ..ಕರೆಂಟ್ ಇಲ್ಲಾ ..ಹಾಗೇ ಸಾಮಾನಿನ
ಚೀಲಗಳನ್ನು ಗೋಡೆಯ ಬದಿಗೆ ಇಟ್ಟು ಮೊಂಬತ್ತಿ ಹಚ್ಚಿ ಇಟ್ಟು ಬಾಗಿಲ ಹತ್ತಿರಕ್ಕೆ ಬರುವಷ್ಟರಲ್ಲಿ ಆಕೆ ಮುಸುಮುಸು
ಅಳುತ್ತ ಮೂಗೂ ಹಿಂಡಿಕೊಳ್ಳುತ್ತಿದ್ದಳು. 'ಮಗನ್ನ ದೂರ ಮಾಡಿ ಏನು ತಂದುಕೊಟ್ಟರೆ ಏನು ಬಂತು' ನಡುನಡುವೆ
ತುಂಡು ತುಂಡು ಮಾತು...ಯಾಕೋ ಆಕೆಯನ್ನು ಕೇಳಬೇಕೆನಿಸಿತು 'ಅಲ್ಲರಿ ನಿಮ್ ಸೊಸೆ ಪ್ರೀತಿಯಿಂದ ಏನೋ
ತಂದಿದ್ದಾಳೆ, ನೀವು ಸಂತೋಷದಿಂದ ಇಸ್ಕೊಂಡು ಒಳ್ಳೇದನ್ನ ಹಾರೈಸಿ. ಯಾಕ್ ಬೇಸರ' 'ನನ್ನ ಮಗನ ಮುಂದೆ
ಇದೆಲ್ಲ ಏನು ಬಿಡ್ರಿ' ಆಕೆಯ ಉತ್ತರಕ್ಕೆ ನಗು ಬಂದಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.